Saturday, February 6, 2016

#ಮನದಾಳ

ಕಡಲಲೆಗಳಂತೆ ಬಂದು
ಗದ್ದಲವೆಬ್ಬಿಸಿ ಹೋಗುವ ನೆನಪುಗಳು;
ದಡದಂತೆ ಎದೆಯೊಳಗೂ ತತ್ತರ,
ಸಿಗುತ್ತಿಲ್ಲ ಕಳೆದು ಹೋದವುಗಳಿಗುತ್ತರ.

ಅದೆಷ್ಟು ಕನಸುಗಳ ಕೊಂದು
ನಿರುಮ್ಮಳನಾಗ ಹೊರಟೆನೋ?
ಅದಷ್ಟೂ ನಿರಾಳತೆಯ ಬದಲು
ವಿರಹಗಳನ್ನೇ ಸಮ್ಮಾನಿಸಿದೆ.

ಕೆಲವೊಂದೆಡೆ ಕೈ ಹಾಕಿ
ಸುಟ್ಟುಕೊಂಡದ್ದೂ ಪಾಠವೇ;
ಅನುಭವಕ್ಕಿಂತ ಮಿಗಿಲಾದ ಗುರುವೆಲ್ಲಿ?
ಹಾಗಾಗಿ ನಾನೀಗ ಚೂರು ನಿಪುಣ,
ಹೆಜ್ಜೆಗಳ ಇಡುವಾಗ ಮೊದಲಿಗಿಂತ ಜಾಗರೂಕ.

ಗೂಡೊಳಗೆ ಕೂಡಿಟ್ಟ ಆಸೆಗಳಿಗೆಲ್ಲ
ಮರಳಿ ರೆಕ್ಕೆ ಬಿಚ್ಚಿ ಹಾರಲು ಕಾತರ;
ಇವನ್ನೆಲ್ಲ ಕೊಂದು ಹಂತಕನಾಗಲಾರೆ,
ಪೋಷಿಸಿ ಸಲಹಿ ಪಸಲು ತೆಗೆವೆ

ಅನವರತ ತುಡಿತ
ಏನಾದರೂ ಮಾಡಬೇಕೀಗ;
ಜಡವಾಗಿರುವುದು
ನನ್ನ ಜಾಯಮಾನವಲ್ಲವಲ್ಲ.

ಮತ್ತದೇ ಕುಳಿತು ಲೆಕ್ಕಾಚಾರದಲಿ ತೊಡಗಿರುವೆ,
ಅಳೆದು, ತೂಗಿ ಸರಿಯಾದ ಹಾದಿಯಲೇ
ಮುನ್ನಡೆದುಬಿಡಬೇಕು
ಇನ್ನೆಲ್ಲೂ ಎಡವದಂತೆ;
ನಂಜುಣ್ಣುವ ಯಾರ ನಾಲಗೆಗೂ
ಕುಹಕದ ವಸ್ತುವಾಗದಂತೆ!

#ಸಾಹುಕಾರ

Tuesday, February 2, 2016

ಉ(ಅ)ಪ್ಪನದು ಅಂಗಡಿ;
ಸಂಜೆ ಶಾಲೆ ಮುಗಿಸಿ ಬಂದು
ಅಲ್ಲಿ ಬಿದ್ದಿರುವ ಖಾಲಿ ಸಿಗರೇಟು ಪ್ಯಾಕೆಟುಗಳನ್ನೆಲ್ಲ ತೆಗೆದು ಜೋಡಿಸಿ ಮಾಡಿದ ಮನೆ ಕಾರುಗಳಲ್ಲೆಲ್ಲ
ಆಟವಾಡಿ ಮೈಮರೆತುಬಿಡುತ್ತಿದ್ದವನು ನಾನು.
ಇದರೆಡೆಯಲೂ ನನ್ನ ಗಮನ ಸೆಳೆಯುತ್ತಿದ್ದುದು
ಉಪ್ಪಾದು ಸ್ನೇಹಬಳಗ..
ಭಿನ್ನ ಧರ್ಮಗಳ ಹೆಸರಿಟ್ಟುಕೊಂಡ
ಕೇವಲ ಮನುಷ್ಯರಿಂದ ತುಂಬಿದ್ದ ಕೂಟವದು.
ಜಗತ್ತಿನ ವಿದ್ಯಮಾನಗಳೆಲ್ಲ ಅಲ್ಲಿ ಬಂದುಹೋಗುತ್ತಿತ್ತು.
ದೂರದಲ್ಲೆಲ್ಲೋ ಕೋಮಿನ ಕಾರಣಕ್ಕೆ ಗಲಭೆ-ದೊಂಬಿಗಳಾದಾಗ ಇಲ್ಲೆಲ್ಲ ಜತೆಗೆ ಕುಳಿತು ಮನುಷ್ಯರಾಗಿಯೇ ಮರುಗುತ್ತಿದ್ದರು.

ಅದ್ಯಾವತ್ತೋ ಒಂದು ದಿನ ಹೊಸ ತರಗತಿಗೆ  ಬುಕ್ಕು, ಬ್ಯಾಗುಗಳೆಲ್ಲ ತೆಗೆಸಿಕೊಟ್ಟು ಶಾಲೆಗೆ ಕರೆದುಕೊಂಡು ಹೋಗಿ ನನ್ನ ಬಿಟ್ಟು ಬರುವಾಗ ಉಪ್ಪ ಹೇಳಿದ ಮಾತೊಂದು ಇನ್ನೂ ಕಿವಿಯೊಳಗೆ ಗುಯಿಂಗುಟ್ಟುತಿದೆ.
"ಕಲಿತು ಬೆಳೆದಂತೆ ಈ ಮನುಷ್ಯರ ನಡುವಿನ ಅಂತರ ಕಡಿಮೆಯಾದೀತು"

ನಾನು ಕಲಿತಿದ್ದೇನೆ.
ನನ್ನಂತೆಯೇ ಇತರರೂ...
ಅಂತರ ಕಡಿಮೆಯಾಗಿದೆಯಾ?
ಅಂದು ಅವರೆಲ್ಲ ಸೇರಿಕೊಂಡು ಮಾಡುತ್ತಿದ್ದಂಥಾ ಚರ್ಚೆಯೊಂದು ಮುಕ್ತವಾಗಿ ಇಂದು ನಮ್ಮೊಳಗೆ ಸಾಧ್ಯ ಇದೆಯಾ?

ನನ್ನ ಪ್ರಕಾರ ಇಲ್ಲ..ಇಲ್ಲ...ಇಲ್ಲ...
ಕನಸಿನಲ್ಲೂ ಕೂಡಾ....

ಯಾಕೆ...?

#Son_of_ಸಾಹುಕಾರ
ಆ ಹೂವಿಗೂ ಆಸೆಯಿತ್ತು,
ಒಂದಷ್ಟು ದಿನ ನಳನಳಿಸಿ
ಇದ್ದು ಬಿಡಬೇಕೆಂದು;
ಮೊಗ್ಗಾಗಿರುವಾಗ ಎಷ್ಟು
ಚಡಪಡಿಸಿರಬಹುದೋ?

ಅರಳಿಬಿಟ್ಟಿತು;
ಕಣ್ತುಂಬಿಕೊಳ್ಳುವ ಬದಲು
ಕಿತ್ತು ನೋಯಿಸುವ ತವಕ ಎಲ್ಲರಿಗೆ;
ಅದರೆಡೆಯಲಿ ಹಕ್ಕು ಸ್ಥಾಪಿಸುವವರಿಗೇನು ಕಮ್ಮಿ?

ಚಂದ ನೋಡಿ
ಎಲ್ಲರೂ ಹೊಗಳುವರೆಂದು
ಆಸೆಪಟ್ಟಿದ್ದು ಹೂವು;
ಸಿಕ್ಕಿದ್ದು ಮಾತ್ರ ನಿರೀಕ್ಷೆ
ಹುಸಿಯಾದ ನೋವು.

ಕೊನೆಗದು ಒಂದೇ ದಿನಕೆ
ನನ್ನಾಯುಷ್ಯವ ಮುಗಿಸಿಬಿಡೆಂದು
ಬೇಡಿಕೊಂಡಿತೊ ಏನೋ?
ಮಸ್ಸಂಜೆಗೇ ಬಾಡಿಹೋಯಿತು

ಕೀಳಲೆಂದು ಬಂದವರು
ಪೆಚ್ಚುಮೋರೆಯಲಿ ಹಿಂತಿರುಗುವಾಗ
ನೋವಿನ ನಡುವೆಯೂ ಹೂವಿನೊಳಗೆ ಸಂಭ್ರಮ!

#ಸಾಹುಕಾರ..
#ಪ್ರೀತಿಯ_ಸಾಲಗಾರ

Thursday, January 28, 2016

©ಭಾವಗೀತೆ®
ಏನು ಮಾಡಿದೆ ಅಂಥಾ ಮೋಡಿ?
ಮನಸು ಅರಳಿದೆ ನಿನ್ನ ನೋಡಿ;

ಮಾತು ನೂರಿದೆ, ಮೂಕವಾಗಿಯೆ
ನಿಂತ ಪರಿಗೆ  ನಾ ಸೆರೆ;
ಅರಿತು ಬಾ ಬಳಿ, ನನ್ನ ಬಾಳಿಗೆ
ಆಗು ನೀನು ಆಸರೆ.

ಕಣ್ಣಕಾಂತಿಗೆ ಹೃದಯ ಓಡಿದೆ,
ಬಂದಿತೇ ನಿನ್ನಾ ಬಳಿ?
ಭಾವಸ್ಪೋಟಕೆ ತಪ್ಪಿ ಹೋಗಿದೆ
ನನ್ನ ಬದುಕಿನಾ ಹಳಿ.

ಹೂವಿನಂದಕೂ ಮಾರುಹೋದೆನು
ಹೀಗೆ ಮೊದಲನೇ ಸಲ;
ಹಾಡಿಹೊಗಳಲು ಪದಗಳಿಲ್ಲ
ಏನು ಚಂದದ ಹಂಬಲ.

ಹನಿವ ಮಳೆಗೆ ನೆನೆವ ಆಸೆ,
ಒಲವು ಬಂದಿರೋ ಸೂಚನೆ;
ಇಂಥ ಜೋರು ಮೋಹ ನೂರು
ರಮಿಸಿ ಸಲಹಿದೆ ತಣ್ಣನೆ.

ಎದೆಯ ತುಂತುರು ಮುಗಿಯುತ್ತಿಲ್ಲ,
ಇನ್ನೂ ಚೂರು ಬರೆಯಲಾ?
ನನ್ನ ಸಂಭ್ರಮ ಹೇಳಿಕೊಳ್ಳಲು
ಚುಕ್ಕಿ ಚಂದ್ರರ ಕರೆಯಲಾ?

#ಸಾಹುಕಾರ

Wednesday, January 20, 2016

ಇರುಳು ಅಂಗಳದಿ ಕುಳಿತು
ಸುಮ್ಮನೆ ಅಂಬರದತ್ತ ಕಣ್ಣನೆಟ್ಟಿದ್ದೆ;
ಶಶಿಯ ಸುತ್ತ ಮುತ್ತಿಕೊಂಡಿರುವ ತಾರೆಗಳು,
ನಾಯಕನ ಸುತ್ತ ಸೇರಿದ ಹಿಂಬಾಲಕರಂತೆ;

ಕಳ್ಳ ಚಂದಿರ, ನೇಸರನ ಬೆಳಕ ಎರವಲು ಪಡೆದು
ಇದ್ದ ಹೊಗಳಿಕೆಗಳನ್ನೆಲ್ಲ ಬಾಚಿಕೊಳ್ಳುವನು
ನಮ್ಮ ಪುಡಾರಿಗಳಂತೆ.

ಸೂರ್ಯನುರಿದು ಹೋದದ್ದು,
ಅಲ್ಲೆಲ್ಲೋ ಮರೆಯಲಿ ನಿಂತು ಚಂದಿರನೆಡೆಗೆ ಬೆಳಕ ಹಾಯಿಸುವುದು
ಯಾರಿಗೂ ನೆನಪಿಲ್ಲ.

ಅಗಸದಲಾತನ ಜತೆಗಿರುವ ಚುಕ್ಕಿಗಳಲಿ
ಕೆಲವರು ತಟಸ್ಥ,
ಇನ್ನೂ ಕೆಲವರು ಅತ್ತಿಂದಿತ್ತ;
ಮಾಯ-ಪ್ರತ್ಯಕ್ಷಗಳ ಕಣ್ಣಾಮುಚ್ಚಾಲೆಯಾಟ

ಇಲ್ಲಿ ಸುತ್ತ ಕಾಣುವ ಅದೇ ಕಪಟ ನಾಟಕಗಳು ಮೇಲೆಯೂ..
ಯಾವನೋ ಆಕಾಶ ನೋಡಿ ಮನಸು ತಿಳಿ ಮಾಡು ಅಂದಿದ್ದಕೆ ನೋಡಿದ್ದಷ್ಟೇ,
ಕಂಡಿದ್ದೆಲ್ಲ ಕೊಂಕೇ,
ಅಥವಾ ನನ್ನ ಸಂಕುಚಿತ ಮನಕ್ಕೆ ಅನಿಸಿದ್ದು.

ಬೇಸರದಿ ಕಣ್ಣತೆಗೆದು ಅಂಗಳದ ಮೂಲೆಗೆ ಹಾಯಿಸಿದರೆ
ಮನೆದೀಪದ ಬೆಳಕಿನ ಪ್ರಭೆಯಲಿ ಹೂವೊಂದು ನಗುತಿದೆ
ಅರೆ, ಇರುವುದೊಂದೇ ದಿನವಾದರೂ ಎಷ್ಟೊಂದು ಖುಷಿಯಾಗಿದೆ;
ಮನದೊಳಗೆ ವಿದ್ಯುತ್ ಸಂಚಾರ;
ಹೂವನ್ನು ದಿಟ್ಟಿಸುತಲೇ ಕಳೆದು ಹೋದೆ ಚೂರು.

ಸಾವರಿಸಿಕೊಂಡು ತಿರುಗಿದರೆ
ಪಕ್ಕದಲೇ ಮೆರವಣಿಗೆಯೊಂದು ಸಾಗುತಿದೆ;
ಎಷ್ಟೊಂದು ಶಿಸ್ತು-ಸಂಯಮ,
ಇರುವೆ ಪುಟಾಣಿಗಳ ಸಂಭ್ರಮದ ಜಾಥಾದಲ್ಲಿ;
ಒಳಗೇನೋ ಉಲ್ಲಾಸ  ಇದ ಕಣ್ತಂಬಿಕೊಳ್ಳುವಾಗ.

ಅಲ್ಲಿಂದಲೇ ವಾಹನ ನಿಬಿಢ ರಸ್ತೆಯತ್ತ ದೃಷ್ಠಿ ಹರಿಯಬಿಟ್ಟೆ;
ಎಡಭಾಗದ ಬಿಳಿ ಬೆಳಕು,
ಬಲಭಾಗವೆಲ್ಲ ಕೆಂಪುಕೆಂಪು;
ಕಾವ್ಯಾತ್ಮಕ ದೃಶ್ಯ;
ಕಂಡು ಮನ ಪುಳಕಿತಗೊಳ್ಳದಿರುವುದೇ?

ಯಾಕಿಲ್ಲ, ಏನಿಲ್ಲ ಹೇಳಿ;
ನಮ್ಮ ಸನಿಹವೇ ಎಲ್ಲ ಸುಂದರವಾಗಿದೆ,
ಕಾಣುವ ಕಣ್ಣಿದ್ದರೆ, ಅನುಭವಿಸುವ 'ಮಗು'ಮನಸ್ಸಿದ್ದರೆ.

ಆದರೂ ನಾವು ನೆಮ್ಮದಿ ಅರಸಿ ದೂರಕೆ ಅಲೆಯುವೆವಲ್ಲ,
ಪಕ್ಕದ ಸಂಭ್ರಮಗಳ ಮರೆತು;
ಯೋಚಿಸುತ್ತಲೇ ಕುಳಿತಿರುವೆ ಸದ್ಯ ಇದನ್ನೇ ಕುರಿತು!

                                                ಸಾಹುಕಾರ್ ಅಚ್ಚು

Saturday, January 9, 2016

ನೇಸರ ಸರಿದಂತೆ
ಅದೇಕೆ ಕಾಡುವ ನೆನಪುಗಳೆಲ್ಲ
ರೆಕ್ಕೆ ಬಿಚ್ಚುವುದೋ?

ಉಕ್ಕಿ ಹರಿವ ಭಾವನೆಗಳ
ಬೆಚ್ಚಗೆ ಹೊದ್ದು ನಿರಾಸೆಯಲೇ ಮಲಗುವೆ ಸದ್ಯ;
ಬಿಸಿಯುಸಿರ ಸೋಕಿ ಕಳೆದ
ಇರುಳುಗಳ ನೆನೆದು

ಉನ್ಮತ್ತ ಲಹರಿಯೊಳು ತೇಲಿಹೋದ
ಕ್ಷಣಗಳೆಲ್ಲ ಎದುರು ನಿಂತು
ಹಂಗಿಸಿದರೇನು ಬಂತು?
ಮರಳಿ ಬಾರದೆಂಬುದು ದಿಟ

ಅದೇ ಮೆಲುಕುತಿರಲು
ನಯನಗಳನ್ನಪ್ಪುವುದೆಲ್ಲ ಮಂಕೇ;
ಒಳಗುಳಿಯುವುದು ಬರೇ ವಿರಹ

ಈ ಬದುಕೊಂದಿಷ್ಟು ಹಿಂದಕ್ಕೋಡಿದ್ದರೆ
ಕಳೆದುಕೊಂಡಿದ್ದರ ಸೋರಿ ಹೋಗದಂತೆ
ಅಣೆಕಟ್ಟು ಕಟ್ಟಿ ಹಿಡಿದಿಡುತ್ತಿದ್ದೆ!

#ಸಾಹುಕಾರ™